ಧರ್ಮ 2
 
	1 ನಾಲ್ಕು ಪುರುಷಾರ್ಥಗಳಲ್ಲಿ ಮೊದಲನೆಯದು.  ಆದರೆ ಫಲಾನುಭವಕ್ಕೂ  ಈ ಹೆಸರೇ ಇದೆ.  ಧರ್ಮಕಾರ್ಯ ಮಾಡಿದವರು ಹೀನಸ್ಥಿತಿಗೆ ಬರಲಾರರು.  ಧರ್ಮದಿಂದ ಮಾನವನ ಪುರೋಭಿವೃದ್ಧಿಯಿದೆ ಎಂದು ಶ್ರುತಿ ಪುರಾಣಗಳು ಹೇಳುತ್ತವೆ.

	ಈ ಹೆಸರಿನಿಂದ ಯಮನನ್ನೂ ಯುಧಿಷ್ಠಿರನನ್ನೂ ಕರೆಯುವುದುಂಟು.

	2 ಸ್ವಾಯಂಭುವ ಮನ್ವಂತರದಲ್ಲಿ ಬ್ರಹ್ಮಮಾನಸ ಪುತ್ರರಲ್ಲಿ ಒಬ್ಬ.  ದಕ್ಷಬ್ರಹ್ಮನ ಹದಿನಾರು ಪುತ್ರಿಯರಲ್ಲಿ ಶ್ರದ್ಧಾ, ಮೈತ್ರೀ, ದಯಾ, ಶಾಂತಿ, ತುಷ್ಟಿ, ಪುಷ್ಟಿ, ಕ್ರಿಯಾ, ಉನ್ನತಿ, ಬುದ್ಧಿ, ಮೇಧಾ, ತಿತಿಕ್ಷಾ, ಹ್ರೀ, ಮೂರ್ತಿ ಎಂಬ ಹದಿಮೂರು ಮಂದಿಯನ್ನು ಮದುವೆಯಾದ.  ಹದಿಮೂರನೆಯವಳಾದ ಮೂರ್ತಿ ನರನಾರಾಯಣರೆಂಬ ಇಬ್ಬರು ಪುತ್ರರನ್ನು ಪಡೆದಳು.  ಉಳಿದ ಹನ್ನೆರಡು ಮಂದಿ ಕ್ರಮವಾಗಿ ಶುಭ, ಪ್ರಸಾದ, ಅಭಯ, ಸುಖ, ಸಂತೋಷ, ಗರ್ಭ, ಯೋಗ, ಅಭಿಮಾನ, ಅರ್ಥ, ಸ್ಮøತಿ, ಕ್ಷೇಮ, ಪ್ರಶಯ ಎಂಬ ಹನ್ನೆಡರು ಮಂದಿ ಪುತ್ರರನ್ನು ಪಡೆದರು.

	ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದಲ್ಲಿ ಬ್ರಹ್ಮಮಾನಸಪುತ್ರರಲ್ಲಿ ಧರ್ಮ ಒಬ್ಬ.  ಈತ ಉತ್ತಾನಪಾದ ವಂಶದ ಪ್ರಾಚೇತಸ ದಕ್ಷನ ಅರವತ್ತು ಮಂದಿ ಕನ್ಯೆಯರಲ್ಲಿ ಅರುಂಧತಿ, ವಸ್ತು, ಜಾಮೀ, ಲಂಘಾ, ಭಾನು, ಮರುದ್ವತಿ, ಸಂಕಲ್ಪಾ, ಮುಹೂರ್ತ, ಸಾಧ್ಯಾ, ವಿಶ್ವಾ ಎಂಬ ಹತ್ತು ಮಂದಿ ಕನ್ಯೆಯರನ್ನು ಮದುವೆಯಾದ ; ಈತ ವಿಶ್ವಾ ಎಂಬಾಕೆಯಲ್ಲಿ ವಿಶ್ವದೇವತೆಗಳನ್ನು ಸಾಧ್ಯಾ ಎಂಬಾಕೆಯಲ್ಲಿ ಸಾಧ್ಯರೆಂಬ ದೇವತೆಗಳನ್ನು ಮುಹೂರ್ತಾ ಎಂಬಾಕೆಯಲ್ಲಿ ಮುಹೂರ್ತಾಭಿಮಾನ ದೇವತೆಗಳನ್ನು ಭಾನು ಎಂಬಾಕೆಯಲ್ಲಿ ಕಿರಣಗಳನ್ನು ಲಂಘಾ ಎಂಬಾಕೆಯಲ್ಲಿ ಘೋಷನೆಂಬುವನನ್ನು ಜಾಮೀಯಲ್ಲಿ ನಾಗವೀಥಿಯನ್ನು ಪಡೆದ.  ಮೊದಲನೆಯವಳಾದ ಅರುಂಧತಿಯಲ್ಲಿ ಸಕಲ ವಿಧವಾದ ಚರಾಚರ ಪ್ರಾಣಿವರ್ಗ ಜನಿಸಿತು.  ಸಂಕಲ್ಪ ಎಂಬಾಕೆಯಲ್ಲಿ ಸಂಕಲ್ಪನೆಂಬ ಕುಮಾರ ಜನಿಸಿದ.

	3 ಒಬ್ಬ ಬ್ರಹ್ಮರ್ಷಿ.  ಒಂಬತ್ತು ಮಂದಿ ಬ್ರಹ್ಮರಲ್ಲಿ ಒಬ್ಬ.  ಬ್ರಹ್ಮನ ದಕ್ಷಿಣ ಸ್ತನದಿಂದ ಹುಟ್ಟಿದವ.  ಮುಂದೆ ಈತನೇ ಯಮನಾದ.  ಈತ ದಕ್ಷಬ್ರಹ್ಮನ ಪುತ್ರಿಯರಾದ ಕೀರ್ತಿ, ಲಕ್ಷ್ಮೀ, ಧೃತಿ, ಮೇಧಾ, ಪುಷ್ಟ, ಶ್ರದ್ಧಾ, ಕ್ರಿಯಾ, ಬುದ್ಧಿ, ಲಜ್ಜಾ, ಮತಿ ಎಂಬ ದಶಕನ್ನಿಕೆಯರನ್ನು ವರಿಸಿ ಅನೇಕ ಪುತ್ರರನ್ನು ಪಡೆದ.  ಸತ್ಯೆ ಎಂಬ ಮಗಳನ್ನು ಬೃಹಸ್ಪತಿಯ ಪುತ್ರನಾದ, ಯಾಗಗಳಲ್ಲಿ ಮೊದಲನೆಯ ಹವಿಸ್ಸನ್ನು ಸ್ವೀಕರಿಸುವ ಶಂಯು ಎಂಬ ಅಗ್ನಿಗೆ ಕೊಟ್ಟು ಮದುವೆ ಮಾಡಿದ.  ಈತ ಅನೇಕ ಧರ್ಮಗಳನ್ನು ತಿಳಿಯಪಡಿಸಿದ್ದಾನೆ.

	4 ಉತ್ತಮ ಮನ್ವಂತರದಲ್ಲಿದ್ದ ಒಬ್ಬ ಬ್ರಹ್ಮರ್ಷಿ.  ಈತ ಸೂನೃತೆ ಎಂಬ ಪತ್ನಿಯಲ್ಲಿ ಸತ್ಯಸೇನನೆಂಬ ಮಗನನ್ನು ಪಡೆದ.  ವಿಷ್ಣುವಿನ ಅಂಶದಿಂದ ಹುಟ್ಟಿದ ಈತ ಇಂದ್ರನಿಗೆ ಸಹಾಯಕನಾಗಿ ಯಕ್ಷ ರಾಕ್ಷಸರನ್ನೂ ಲೋಕವನ್ನೂ ಹಿಂಸಿಸತಕ್ಕ ಇತರ ಭೂತಗಣಗಳನ್ನು ಸಂಹರಿಸಿದ.
(ಬಿ.ಎಸ್.ಎಸ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ